ಟಿಬೆಟನ್ ಕಲೆ -
ಭಾರತೀಯ ಮತ್ತು ಚೀನೀ ಕಲೆಗಳು ಟಿಬೆಟಿನ ಕಲೆಗೆ ಮೂಲ ಆಕರಗಳಾಗಿದ್ದರೂ ಆ ದೇಶ ತನ್ನತನವನ್ನು ಉಳಿಸಿಕೊಂಡಿದೆ. ಕಾಶ್ಮೀರಿ ಕಲೆ ಪಾಲ ಮತ್ತು ಸೇನಾ ಶೈಲಿಗಳು ಭಾರತದಲ್ಲಿ ಕುಂಠಿತವಾಗಿ ಕಣ್ಮರೆಯಾದ ಮೇಲೆಯೂ ಟಿಬೆಟಿನಲ್ಲಿ ಅವನ್ನು ಬೆಳೆಸಿಕೊಂಡು ಬರಲಾಗಿದೆ. ಟಿಬೆಟನ್ ಕಲೆ ಮುಖ್ಯವಾಗಿ ಮತಗಳಿಗೆ ಸಂಬಂಧಿಸಿದ್ದು. ಬೌದ್ಧಮತ ಭಾರತದಿಂದ ಇಲ್ಲಿಗೆ ಬಂದು ತನ್ನ ಪ್ರಭುತ್ವವನ್ನು ಸ್ಥಾಪಿಸಿಕೊಳ್ಳುವುದಕ್ಕೆ ಮುಂಚೆ ಇಲ್ಲಿಯೇ ಇದ್ದ ಮತಕ್ಕೆ ಬಾನ್ ಎಂದು ಹೆಸರು. ಈ ಮತಕ್ಕೆ ಸಂಬಂಧಿಸಿದ ಕಲೆಗೆ ಬಾನ್‍ಪೊ ಶೈಲಿ ಎನ್ನುತ್ತಾರೆ. ಈ ಬಾನ್‍ಪೊ ಮಾದರಿಯ ದೇವಾಲಯಗಳ ಆಕಾರ ಹೇಗಿತ್ತೆಂಬುದು ತಿಳಿಯದಾದರೂ ಪಶ್ವಿಮ ಟಿಬೆಟ್‍ನಲ್ಲಿರುವ ಕಿಂಗ್ ಲುಂಗ್ ಎಂಬಲ್ಲಿರುವ ಗುಂಡಾದ ಕಟ್ಟಡವನ್ನು ಆ ಶೈಲಿಯದೆಂದು ಸೂಚಿಸುತ್ತಾರೆ. ಈ ಕಾಲದ ದೊರೆಗಳ ಗೋರಿದಿಬ್ಬಗಳು ಬೇರೆ ಬೇರೆ ಪ್ರಮಾಣಗಳಲ್ಲಿದ್ದರೂ ಪ್ರತಿಯೊಂದರಲ್ಲೂ ಒಂದು ಸಮಾಧಿ ಕೋಣೆಯಿದ್ದು ಅದರೆ ಮೇಲೆ ನಿಲ್ಲಿಸಿರುವ ಕಂಬವೊಂದು ಮಾತ್ರ ಮೇಲೆ ಗೋಚರಿಸುತ್ತದೆ. ಈ ಕಂಬಗಳ ಮೇಲೆ ಶಾಸನಗಳೂ ಚೀನೀ ಮಾದರಿಯ ಅಲಂಕರಣಗಳೂ ಇರುವುದುಂಟು. ಲ್ಹೇ ಎಂಬಲ್ಲಿರುವ ದುರ್ಗ ಮುಖ್ಯವಾದ ವಾಸ್ತು ಮಾದರಿಗಳಲ್ಲೊಂದು. ಈ ಬೃಹತ್ ಕಟ್ಟಡಗಳನ್ನು ಹಸಿ ಇಟ್ಟಿಗೆಯಿಂದ ಕಟ್ಟಿ ನಯಗೊಳಿಸಿ ಸುಣ್ಣ ಬಳಿಯಲಾಗಿರುತ್ತದೆ. ಬಾನ್‍ಪೊ ಶಿಲ್ಪ ಮಾದರಿಯ ವಿಷಯ ಹೆಚ್ಚು ತಿಳಿದು ಬಂದಿಲ್ಲ. ಆ ಕಾಲಕ್ಕೆ ಸೇರಿದುದೆಂದು ಸೂಚಿಸಬಹುದಾದ ಕೆಲವು ಶಿಲ್ಪ ಮಾದರಿಗಳು ಚೀನೀ ಶಿಲ್ಪ ಮಾದರಿಗಳಿಂದ ಪ್ರಭಾವಿತಗೊಂಡಿವೆ. ಬಾನ್‍ಪೊ ದೇವಾಲಯಗಳಿರುವ ಚಿತ್ರಕಲೆ ಹೆಚ್ಚಾಗಿ ಕಿರುಚಿತ್ರಣಗಳನ್ನು ಹೊಂದಿದ್ದು ಪೌರಾಣಿಕ ಕತೆಗಳನ್ನು ಚಿತ್ರಿಸುತ್ತವೆ. ಅವುಗಳಲ್ಲಿ ಕಥಾನಾಯಕರ ಚಿತ್ರಗಳು ಕೂಡ ಕಿರುಪ್ರಮಾಣದಲ್ಲೇ ಇರುತ್ತವೆ. ಇದನ್ನು ಬಾನ್‍ಪೊ ಸಂತ ಜೆನ್ ರಾಬ್ ಮಿಟೊನ ಕತೆಯನ್ನು ವಿವರಿಸಲು ಚಿತ್ರದಲ್ಲಿ ಕಾಣಬಹುದು.

ಬೌದ್ಧಧರ್ಮ ಇಲ್ಲಿ ವ್ಯಾಪಕಾಗಿ ಹರಡಿದ ಮೇಲೆ ಭಾರತೀಯ ಕಲೆಗಳಿಂದ ಪ್ರಭಾವಿತಗೊಂಡ ಕಲೆಗಳು ವಿಶೇಷವಾಗಿ ಪ್ರವರ್ಧಮಾನಕ್ಕೆ ಬಂದವು. ಸುಮಾರು 7ನೆಯ ಶತಮಾನದಲ್ಲಿದ್ದ ಸ್ರಾಂಗ್ ಬೀನ್ ಸ್ಗಾಮ್ ಪೋ ಎಂಬುವನೇ ಟಿಬೆಟ್‍ನ ಮೊದಲ ಬೌದ್ಧ ದೊರೆಯೆಂಬ ಐತಿಹ್ಯವಿದೆ.

ಗೋಡೆ, ತಟ್ಟು, ರೇಷ್ಮೆ ಬಟ್ಟೆ ಅಥವಾ ಮರದ ಹಲಗೆಗಳ ಮೇಲೆ ಮೂಡಿಸಿರುವ ವರ್ಣಚಿತ್ರಗಳು ಟಿಬೆಟ್ಟಿನಲ್ಲಿ ಅತ್ಯಂತ ಹೊರವಾಗಿದ್ದು ಇತರ ಕಲೆಗಳನ್ನು ಮೀರಿಸಿವೆ. ಇವುಗಳಲ್ಲಿ ಮುಖ್ಯವಾಗಿ ಬುದ್ಧ, ಬೋಧಿಸತ್ತ್ವರು, ಗುರುಗಳು-ಇವರನ್ನು ಚಿತ್ರಿಸಿರುವುದರೊಂದಿಗೆ ತಾಂತ್ರಿಕ ಘಟನೆಗಳನ್ನು ಹೇರಳವಾಗಿ ಚಿತ್ರಿಸಲಾಗಿದೆ. ಟಿಬೆಟ್ ಚರಿತ್ರಕಾರ ತಾರಾನಾಥ ತಿಳಿಸಿರುವಂತೆ ಈ ಚಿತ್ರಕಾರರು ಭಾರತೀಯ ಚಿತ್ರಕಾರರಿಂದ ತರಬೇತಿ ಹೊಂದಿದ್ದರು. ಆದ್ದರಿಂದಲೇ ಈ ಚಿತ್ರಗಳಲ್ಲಿ ಭಾರತೀಯ ಸಂಪ್ರದಾಯದ ಛಾಯೆ ಇದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗುವುದಾದರೆ ಅಜಂತಾ ಸಂಪ್ರದಾಯದ ಛಾಯೆಯನ್ನು ಮುಖ್ಯವಾಗಿ ಅವಲೋಕಿತೇಶ್ವರ, ಕ್ಷಿತಿಗರ್ಭರ ಚಿತ್ರಗಳಲ್ಲಿ ಗುರುತಿಸಬಹುದು. ಮುಂದೆ ನೇಪಾಳೀ ಶೈಲಿಯ ಪ್ರಭಾವ ಹೆಚ್ಚಾಯಿತು. ಹೀಗೆ ಬೇರೆಬೇರೆ ಪ್ರಭಾವಗಳು ಟಿಬೆಟ್ ಚಿತ್ರಕಲೆಯ ಮೇಲೆ ಬಿದ್ದರೂ ಅದು ತನ್ನದೇ ಆದ ಕೆಲವು ವೈóóಶಿಷ್ಟ್ಯಗಳನ್ನು ಉಳಿಸಿಕೊಂಡು ಬಂದಿತು. ಇದರಲ್ಲಿ ಕಲಾದೃಷ್ಟಿಗಿಂತ ಮತಪ್ರಕ್ರಿಯೆಗಳ ಪ್ರಕಟಣೆಗೇ ಪ್ರಾಧಾನ್ಯ. ಆರಾಧನೆಯ ಪ್ರತೀಕವಾಗಿ ಚಿತ್ರರಚನೆಯಾದ್ದರಿಂದ ಇವುಗಳಲ್ಲಿ ಚಿತ್ರಕಾರರ ಭಾವಾಭಿವ್ಯಕ್ತಿಗಿಂತ ಶಾಸ್ತ್ರ ರೀತಿಯ ರಚನೆ ಮುಖ್ಯವಾಗಿದ್ದು ಕಟ್ಟುಪಾಡುಗಳು ಹೆಚ್ಚು. ಚಿತ್ರಗಳಲ್ಲಿ ಗಾಢವರ್ಣ ಸಂಯೋಜನೆ ಎದ್ದು ಕಾಣುತ್ತದೆ. ಇವುಗಳಲ್ಲಿ ಬಣ್ಣಕ್ಕೆ ಹೆಚ್ಚು ಅರ್ಥವಿದೆ. ಬುದ್ಧರು ಹಾಗೂ ಬೋಧಿಸತ್ತ್ವರಿಗೆ ಸಂಬಂಧಿಸಿದ ಇತರ ದೇವತೆಗಳು ಒಬ್ಬೊಬ್ಬರಿಗೂ ಒಂದೊಂದು ಗೊತ್ತಾದ ಬಣ್ಣವಿರುವುದರಿಂದ ಬಣ್ಣದ ಆಯ್ಕೆಯಲ್ಲಿಯೂ ಚಿತ್ರಕಾರ ನಿಸ್ಸಹಾಯಕ. ಕಟ್ಟುನಿಟ್ಟಾಗಿ ಈ ಪದ್ಧತಿಯನ್ನು ಪಾಲಿಸಬೇಕಾದುದರಿಂದ ಭಾರತೀಯ ವ್ಯಕ್ತಿಚಿತ್ರಕಲೆಯಲ್ಲಿ ಭಾವಾಭಿವ್ಯಂಜನೆಗೆ ದೊರೆತಿರುವಷ್ಟು ಅವಕಾಶ ಇಲ್ಲಿ ಇವನಿಗಿಲ್ಲ. ಆದರೂ ಚಿತ್ರವಿಚಿತ್ರವಾದ ಅಲಂಕರಣಗಳನ್ನು ತುಂಬಿಸುವುದರಲ್ಲಿ ಚಿತ್ರಕಾರನಿಗೆ ಸ್ವಾತಂತ್ರ್ಯವಿದ್ದುದರಿಂದ ಟಿಬೆಟ್ಟಿನ ಚಿತ್ರಕಲೆಯಲ್ಲಿ ಅಲಂಕರಣಕಲೆ, ಸೂಕ್ಷ್ಮ ಚಿತ್ರಣಕಲೆ ಹೆಚ್ಚು ನವುರಾಗಿ ಬೆಳೆದುವು. ಟಿಬೆಟ್ಟಿನ ಜನಜೀವನ, ಪ್ರಕೃತಿ ಚಿತ್ರಣ, ಹಸಿರು ಹುಲ್ಲುಗಾವಲು, ಜೂಜೋಡುವ ಕುದುರೆಸವಾರರು, ಉನ್ನತ ಪರ್ವತಶಿಖರಗಳು, ಅನಂತನೀಲಾಕಾಶದಲ್ಲಿ ತೇಲಾಡುವ ಮೋಡಗಳು-ಇವುಗಳಲ್ಲಿ ತನ್ನ ಪ್ರತಿಭೆಯನ್ನು ಚಿತ್ರಕಾರ ಸೂರೆಗೈದಿದ್ದಾನೆ. ಈ ರೀತಿಯ ಚಿತ್ರಗಳು ಸೊಸ್ಕ್ಯಪನ ಕಾಲದಲ್ಲಿಯೇ ಕಂಡುಬರುತ್ತವೆ ಮತ್ತು ಇವುಗಳಲ್ಲಿ ಎದ್ದು ಕಾಣುವ ಚೀನೀಕಲೆಯ ಪ್ರಭಾವ ಮುಂದೆ ಬೆಳೆಯುತ್ತ ಹೋಗುತ್ತದೆ. ಆದರೂ ಚೀನೀ ಚಿತ್ರಗಳಲ್ಲಿರುವ ನವುರು ಇಲ್ಲಿ ಕಡಿಮೆಯೆ. ಈ ಪುರಾತನ ಚಿತ್ರಗಳ ಮತ್ತೊಂದು ವೈಶಿಷ್ಟ್ಯವೆಂದರೆ ಚಿತ್ರಿತ ಮೇಲ್ಮೈಯ ಯಾವ ಭಾಗವನ್ನೂ ಬಿಡದೆ ಚಿತ್ರಗಳಿಂದ ಗಿಡಿದು ತುಂಬಿರುವುದು. ಇದರಿಂದ ಈ ಚಿತ್ರಕಲೆಗೆ ಮೂಲವಾದ ಚೀನೀ ಅಥವಾ ಭಾರತೀಯ ಚಿತ್ರಗಳೊಂದಿಗೆ ಇವನ್ನು ಹೋಲಿಸಲಾಗದು. ದೊಡ್ಡದಾದ ದೇವಾಲಯ ಅಥವಾ ಅರಮನೆಗಳ ಭಿತ್ತಿಚಿತ್ರಗಳ ಮೇಲೆ ಚಿತ್ರಕಾರನ ಹೆಸರು ಒಮ್ಮೊಮ್ಮೆ ಇರುವುದುಂಟು.

ಟಿಬೆಟ್ಟಿನಲ್ಲಿ ಸಾಮಾನ್ಯವಾಗಿ ಕಂಡುಬರುವ ಗ್ರಂಥಗಳ ಚಿತ್ರಿತಹಸ್ತಪ್ರತಿಗಳು ಭಾರತ ಮತ್ತು ನೇಪಾಳೀ ಮಾದರಿಗಳನ್ನನುಸರಿಸಿವೆ. ಮೇಲ್ಪುಟಗಳಲ್ಲಿ ಮಾತ್ರವಲ್ಲದೆ ಪುಟಪುಟಗಳಲ್ಲಿಯೂ ಕಿರುಚಿತ್ರಗಳನ್ನು ಕಾಣಬಹುದು. ಈ ಹಸ್ತಪ್ರತಿಗಳಿಗೆ ರಕ್ಷಣಾಕವಚಗಳಾಗಿ ಉಪಯೋಗಿಸಿರುವ ಮರದ ಹಲಗೆಗಳ ಮೇಲೆ ತೆಳುವಾಗಿ ನವುರಾಗಿ ಮೂಡಿರುವ ಉಬ್ಬು ಕಂಡರಣೆಯಲ್ಲಿ ಅಸಾಧಾರಣವಾದ ಪರಿಕರ್ಮಕೌಶಲವನ್ನು ಕಾಣಬಹುದು. ಇವುಗಳಿಗಾಗಿ ಭಾರತ ನೇಪಾಳಗಳಿಂದ ಮಾದರಿಗಳನ್ನು ಇಲ್ಲಿಗೆ ತರಿಸಿಕೊಂಡುದೂ ಉಂಟು.

ಉಬ್ಬಿದಂತಿರುವ ಸೂಡು ಚಿತ್ರಕಲೆಯನ್ನೂ ಟಿಬೆಟ್ಟಿನ ಚಿತ್ರಕಾರರು ಬಳಸಿದ್ದಾರೆ. ಇವು ಚಪ್ಪಟೆ ಚಿತ್ರಗಳಿಗಿಂತ ಹೆಚ್ಚು ಸುಂದರವಾಗಿದ್ದು ಮುಖಭಾವಗಳು ಎದ್ದು ಕಾಣುವುದಲ್ಲದೆ ಹೂಬಳ್ಳಿ ಸುರುಳಿಗಳಲ್ಲಿ ಬಣ್ಣಗಳ ಆಯ್ಕೆ ನವೀನವಾಗಿದೆ. ಪುಷ್ಟಾಲಂಕರಣಗಳು ನವುರಾಗಿವೆ. ಪವಿತ್ರಸ್ಥಳಗಳನ್ನು ಚಿತ್ರಿಸುವುದರಲ್ಲಿ ಈ ಚಿತ್ರಕಾರರಿಗೆ ಆಸಕ್ತಿ ಹೆಚ್ಚು. ಲಾಸದಲ್ಲಿನ ದೇವಮಂದಿರಗಳನ್ನು ಚಿತ್ರಿಸಿರುವ ಇಂಥ ಒಂದು ಚಿತ್ರದಲ್ಲಿ ಸಣ್ಣಸಣ್ಣ ಗುಡಿಗಳನ್ನೂ ವಿವರಪೂರ್ಣವಾಗಿ ಚಿತ್ರಿಸಿರುವುದನ್ನು ನೋಡಬಹುದು.

ಟಿಬೆಟ್ಟಿನಲ್ಲಿ ಹೇರಳವಾಗಿ ಕಾಣಸಿಗುವುವೆಂದರೆ ಲೋಹಮೂರ್ತಿಗಳು. ಇವು ಸಾಮಾನ್ಯವಾಗಿ ಮಿಶ್ರಲೋಹದಿಂದ ಮಾಡಿರುವ ಟೊಳ್ಳುಮೂರ್ತಿಗಳು. ಅಷ್ಟ ಧಾತುಗಳಿಂದ ಮಾಡಿದ ಬೆಲೆಬಾಳುವ ಮೂರ್ತಿಗಳೂ ಉಂಟು. ಲೋಹಮೂರ್ತಿಗಳಿಗೆ ಗಿಲೀಟುಮಾಡುವ ಪದ್ಧತಿ ಹೆಚ್ಚು ವ್ಯಾಪಕವಾಗಿತ್ತು. ಶಿಲಾಮೂರ್ತಿಗಳು ಕಡಿಮೆಯೇ. ಗಚ್ಚಿನ ಮೂರ್ತಿಗಳೂ ಮರದ ಭೂಮಿಕೆಯ ಮೇಲೆ ಮಣ್ಣು ಹುಲ್ಲು ಬೆರೆತ ಜೇಡಿಯಿಂದ ಮಾಡಿ ಆಕಾರ ಕೊಟ್ಟು ಗಚ್ಚಿನ ತೆಳು ಲೇಪನದ ಮೇಲೆ ಬಣ್ಣಬಳಿದು ಮೂರ್ತಿಗಳೂ ಇವೆ.

ಬೌದ್ಧಮತದಂತೆ ಶಿಲ್ಪವೂ ಭಾರದಿಂದಲೇ ಇಲ್ಲಿಗೆ ಬಂದುದು ಸರಿಯಷ್ಟೆ. ಅನೇಕ ಮೂರ್ತಿಗಳನ್ನು ಭಾರತಕ್ಕೆ ಭೇಟಿಕೊಟ್ಟಿದ್ದ ಭಿಕ್ಷುಗಳು ಹಾಗೂ ಇತರರು ತಮ್ಮೊಡನೆ ತಂದರೆಂಬ ಹೇಳಿಕೆ ಇದೆ. ಟಿಬೆಟ್ಟಿನ ಅತ್ಯಂತ ಪ್ರಾಚೀನವಾದ ಬೌದ್ಧ ಮೂರ್ತಿ ಮಗಧದಿಂದ ಬಂದುದೆಂದು, ಅದು ಚೀನಕ್ಕೆ ಮೊದಲು ಬಂದಿದ್ದು ಅಲ್ಲಿನ ರಾಜಕುವರಿಯೊಬ್ಬಳು ಟಿಬೆಟಿನ ಮೊದಲ ಬೌದ್ಧ ದೊರೆಯನ್ನು ಮದುವೆಯಾದಾಗ ಅದನ್ನು ಇಲ್ಲಿಗೆ ತಂದುದಾಗಿ ಒಂದು ಐತಿಹ್ಯವಿದೆ. ಲಾಸದ ಜೊಖಾಂಗ್‍ನಲ್ಲಿ ಈಗಲೂ ಆ ಮೂರ್ತಿಯಿದ್ದು ಬೌದ್ಧಶಿಲ್ಪಗಳಲ್ಲಿ ಶ್ರೇಷ್ಠವಾದುದೆಂದು ಹೆಸರು ಪಡೆದಿದೆ. ಹತ್ತಿರ ಹತ್ತಿರದ ನೆರಿಗೆಯನ್ನುಳ್ಳ ಉಡುಪನ್ನು ತೊಟ್ಟಿರುವಂತೆ ತೋರಿಸಿರುವುದೇ ಇದರ ವೈಶಿಷ್ಟ್ಯ. ಜೋಕಾನ್‍ನಲ್ಲಿರುವ ಅವಲೋಕಿತೇಶ್ವರನ ಮೂರ್ತಿಯನ್ನು ದಕ್ಷಿಣ ಭಾರತದಿಂದ ಟಿಬೆಟಿಗೆ ತಂದಿರಬೇಕೆಂಬ ಅಭಿಪ್ರಾಯವಿದೆ. ಕಾಶ್ಮೀರದಿಂದ ಹಲವು ಶಿಲ್ಪಿಗಳು ಟಿಬೆಟ್ಟಿಗೆ ಹೋಗಿ ಕೆಲಸ ಮಾಡಿರುವುದೂ ಉಂಟು. ಹಾಗೆಯೇ ಬ್ರಾನ್‍ಯಾನಲ್ಲಿರುವ ಕೆಲವು ಲೋಹ ಮೂರ್ತಿಗಳು ಪಾಲಶೈಲಿಯಲ್ಲಿವೆ. ಮುಂದೆ ಟಿಬೆಟ್ಟಿನ ಶಿಲ್ಪ ನೇಪಾಳೀ ಮಾದರಿಗೆ ಹೆಚ್ಚು ಹೊಂದಿಕೊಂಡಿತು. ಲಕ್ ಎಂಬ ಊರು ಮೂರ್ತಿಗಳನ್ನು ತಯಾರಿಸುವ ಕೇಂದ್ರವಾಗಿತ್ತು. ಚಿತ್ರಕಲೆಯಂತೆ ಮೂರ್ತಿಶಿಲ್ಪವೂ ಹೆಚ್ಚು ಸಂಪ್ರದಾಯ ಬದ್ಧವಾಗಿದ್ದುದರಿಂದ ಬುದ್ಧನ ಮೂರ್ತಿಗಳಲ್ಲಿ ಅಲೌಕಿಕತೆಗಿಂತ ಸಾಂಪ್ರದಾಯಿಕವಾಗಿ ಸೆಡೆತುಕೊಂಡಿರುವ ಲಕ್ಷಣಗಳು ಹೆಚ್ಚು. ಆದರೆ ತಾಂತ್ರಿಕ ದೇವತೆಗಳಲ್ಲಿ ಹೆಚ್ಚು ಕ್ರಿಯಾಶೀಲತೆಯನ್ನು ಕಾಣಬಹುದು. ದ್ವಾರಪಾಲಕರ ಮೂರ್ತಿಗಳಂಥ ಕೆಲವು ಮೂರ್ತಿಗಳಲ್ಲಿ ಚೀನೀಕಲೆಯ ಪ್ರಭಾವ ವ್ಯಕ್ತವಾಗುತ್ತದೆ. ಆದರೆ ತಾಂತ್ರಿಕ ದೇವತೆಗಳ ಮೂರ್ತಿಗಳನ್ನು ರಚಿಸುವುದರಲ್ಲಿ ನೇಪಾಳೀ ಶೈಲಿಯ ಪ್ರಭಾವವಿದ್ದರೂ ತನ್ನದೇ ಆದ ಟಿಬೆಟ್ ಶೈಲಿಯನ್ನು ಅವುಗಳಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಮಹಾಯಾನ ವಜ್ರಯಾನಗಳಿಗೆ ಸಂಬಂಧಿಸಿದಂತೆ ಅನೇಕ ಮೂರ್ತಿಗಳಿದ್ದು ಅವುಗಳ ರಚನೆ ರೀತಿ, ರೂಪ, ಭಾವ ಮುಂತಾದ ಮೂರ್ತಿವಿವರವನ್ನು ತಿಳಿಸುವ ಗ್ರಂಥಗಳ ಕಟ್ಟುಪಾಡಿಗೆ ಒಳಗಾಗಿದೆ. ಹೇರಳವಾಗಿ ರಚಿತವಾಗಿರುವ ಮೂರ್ತಿಗಳೆಂದರೆ ಅವಲೋಕಿತೇಶ್ವರ, ತಾರ ಮತ್ತು ಮಂಜಶ್ರೀ. ಅವಲೋಕಿತೇಶ್ವರನ ಹಲವು ಬಗೆಯ ಮೂರ್ತಿಗಳುಂಟು. ನಾಲ್ಕು ಕೈಗಳಿರುವ ಮೂರ್ತಿಯಿಂದ ಹಿಡಿದು ಹನ್ನೊಂದು ತಲೆಗಳು, ಸಹಸ್ರಬಾಹುಗಳು, ಅಥವಾ ಸಹಸ್ರನೇತ್ರಗಳುಳ್ಳ ಮೂರ್ತಿಯವರೆಗೂ ಬಗೆಬಗೆಯಾದ ಮೂರ್ತಿಗಳುಂಟು. 10 ರಿಂದ 12 ಮೀಟರುಗಳಷ್ಟು ಎತ್ತರವಾದ ಬೋಧಿಸತ್ತ್ವ ಅವಲೋಕಿತೇಶ್ವರನ ಹನ್ನೊಂದು ತಲೆಗಳುಳ್ಳ ಲೋಹಮೂರ್ತಿಗಳು ಅನೇಕ ಇವೆ.
ಟಿಬೆಟಿನ ಕಲಾಕಾರರು ವರ್ಣಚಿತ್ರಗಳಿಗಿಂತ ಶಿಲ್ಪಗಳಲ್ಲಿ ಮಾನವ ಪ್ರತಿಕೃತಿಗಳನ್ನು ರೂಪಿಸುವುದರಲ್ಲಿ ಸಿದ್ಧಿಪಡೆದಿದ್ದಾರೆ. ಇಲ್ಲಿ ದೊರೆತಿರುವ ಬೌದ್ಧಯತಿಗಳ, ಗುರುಗಳ ಮೂರ್ತಿಶಿಲ್ಪ ಅಸಂಖ್ಯಾತ. ದೇವತೆಗಳ ಮೂರ್ತಿಗಳಿಗಿಂತ ಈ ಪ್ರತಿಕೃತಿಗಳು ಹೆಚ್ಚು ಸ್ವಾಭಾವಿಕವಾಗಿವೆ. ಇಂಥ ಪ್ರತಿಮೆಗಳನ್ನು ಜೇಡಿ ಅಥವಾ ಗಚ್ಚಿನಲ್ಲಿಯೂ ಮಾಡಿ ಅವಕ್ಕೆ ಬಣ್ಣಹಾಕಿರುವುದೂ ಉಂಟು. ಸಾಪರಂಗ್‍ನಲ್ಲಿರುವ ಕೆಲವು ದೇವಾಲಯಗಳಲ್ಲಿ ಈ ರೀತಿಯ ಸುಂದರವಾದ ಮೂರ್ತಿಗಳನ್ನು ನೋಡಬಹುದು. ಮತ್ತು ಇದೇ ರೀತಿ ಚಾಸಾದ ದೇವಾಲಯದಲ್ಲಿಯೂ ಸಾಲಾಗಿ ನಿಂತಿರುವ ಭವ್ಯವಾದ ಉಡಿಗೆಯನ್ನು ಧರಿಸಿರುವ ಬೋದಿಸತ್ತ್ವ ಮೂರ್ತಿಗಳ ಸಾಲೇ ಇವೆ. ಇವು ಪ್ರಮಾಣಬದ್ಧವಾಗಿವೆ; ಸಣ್ಣ ಸಣ್ಣ ಅಲಂಕರಣಗಳನ್ನು ಇವುಗಳಲ್ಲಿ ಹೆಚ್ಚು ಶ್ರದ್ಧೆಯಿಂದ ಪೂರೈಸಲಾಗಿದೆ. ಅತ್ಯಂತ ಹೊಳಪು ಬರುವಂತೆ ನಯಗೊಳಿಸಿರುವ ಈ ಮೂರ್ತಿಗಳು ಟಿಬೆಟಿನ ಶಿಲ್ಪಕಲೆಗೆ ಒಳ್ಳೆಯ ಮಾದರಿಗಳು, ಪೂರ್ಣರೂಪದ ಶಿಲಾಮೂರ್ತಿಗಳು ಇಲ್ಲಿ ಅಪರೂಪವಾಗಿರುವುದಕ್ಕೆ ಕಾರಣ ಭಾರತದಿಂದ ಸುಲಭವಾಗಿ ಸಾಗಿಸಬಹುದಾದ ಲೋಹಮೂರ್ತಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿಗೆ ತಂದುದು ಮತ್ತು ಅವುಗಳನ್ನೇ ಮಾದರಿಯಾಗಿಟ್ಟುಕೊಂಡು ಲೋಹಶಿಲ್ಪಗಳನ್ನು ಬೆಳೆಸಿದುದು.

ಲಾಸದಲ್ಲಿರುವ ರೋಮಾಚ ಮತ್ತಿತರ ದೇವಾಲಯಗಳನ್ನು ಸ್ರಾಂಸ್ಟಾನ್ ಪೊ ಎಂಬ ಬೌದ್ಧ ದೊರೆ ಮತ್ತು ಅವನ ರಾಣಿಯರು ಕಟ್ಟಿಸಿದರೆಂಬ ಐತಿಹ್ಯ ಇದೆ. ಮಂಡಲಾಕಾರದ ತಲವಿನ್ಯಾಸವಿರುವ ಈ ದೇವಾಲಯಗಳ ಭಾರತದ ಓದಂತಿ ಪುರದ ದೇವಾಲಯಗಳ ಮಾದರಿಯಲ್ಲಿರುವುದಾಗಿ ಹೇಳುತ್ತಾರೆ. ಈ ಕೆಲವು ದೇವಾಲಯಗಳಲ್ಲಿ ಅದೇ ಕಾಲದ ಭಿತ್ತಿಚಿತ್ರಗಳನ್ನು ನೋಡಬಹುದು. ಲಾಖಾನ್ ದೇವಾಲಯಗಳು ದೀರ್ಘ ಚತುರಸ್ರಾಕಾರದಲ್ಲಿದ್ದು ಬುದ್ಧನ ಅವಶೇಷಗಳಿಗಾಗಿ ನಿರ್ಮಿತವಾದವು. ದೊಡ್ಡ ದೇವಾಲಯಗಳ ಸುತ್ತಲೂ ಮಠಗಳುಂಟು. ಬೃಹತ್ ಆಕಾರದ ಲೋಹಮೂರ್ತಿಗಳಿಗಾಗಿ ಕಟ್ಟಿರುವ ದೇವಾಲಯಗಳು ಹಲವು ಅಂತಸ್ತುಗಳಲ್ಲಿದ್ದು ಆ ಮೂರ್ತಿಗಳನ್ನು ಬೇರೆ ಬೇರೆ ಹಂತಗಳಲ್ಲಿ ದರ್ಶನಮಾಡಲು ಅನುಕೂಲವಾಗಿವೆ.

ಭಾರತದ ಸ್ತೂಪದ ಮಾದರಿಯಲ್ಲಿರುವ ಕಟ್ಟಡಗಳು ಮಹಾಯಾನ ಬೌದ್ಧಮತ ಟಿಬೆಟಿನಲ್ಲಿ ಹರಡಿದಾಗ ಕಟ್ಟಿದುವು. ಬೃಹದಾಕಾರದಲ್ಲಿರುವ ಇವು ತಮ್ಮದೇ ಆದ ಶೈಲಿಯಲ್ಲಿದ್ದು ಉನ್ನತವಾದ ಜಗತಿಯ ಮೇಲೆ ನಿರ್ಮಿತವಾಗಿವೆ. ಕೆಲವು ವೇಳೆ ಈ ಜಗತಿಯಲ್ಲಿಯೇ ಒಂದು ಗುಡಿಯಿರುವುದೂ ಉಂಟು. ತುದಿಯಲ್ಲಿ ಗುಂಡಾದ ಗೊಮ್ಮಟ, ಆದರ ಮೇಲೆ ಛತ್ರಿಗಳೂ ಇರುತ್ತವೆ. ಚೌಕಾಕಾರದ ತಳವಿನ್ಯಾಸದ ಕಟ್ಟಡಗಳಲ್ಲಿ ಹೊರಗೋಡೆಗೂ ಒಳಗುಡಿಗೂ ನಡುವೆ ಪ್ರದಕ್ಷಿಣಾಪಥವೂ ಇರುವುದುಂಟು. ಇವುಗಳ ಮೇಲ್ಭಾಗದಲ್ಲಿ ಗಿಲೀಟುಮಾಡಿದ ತಾಮ್ರದ ಹೊದಿಕೆಯಿರುವುದು ಸಾಮಾನ್ಯ. ದುರ್ಗ ಹಾಗೂ ಅರಮನೆಗಳ ಬೃಹತ್ ಕಟ್ಟಡಗಳಲ್ಲಿ ವೈವಿಧ್ಯ ತರಲು ಗಚ್ಚಿನ ಅಚ್ಚ ಕೆಂಪು ಪಟ್ಟಿಗಳನ್ನು ಬಿಡಿಸಿರುವುದುಂಟು.

ಟಿಬೆಟ್ ಜನರ ಅಲಂಕಾರಪ್ರಿಯತೆಯ ಪರಿಣಾಮವಾಗಿ ಹಲವು ರೀತಿಯ ಕುಶಲಕಲೆಗಳು ಅಲ್ಲಿ ಬೆಳೆದುಬಂದಿವೆ. ತಾಮ್ರದ ಕೂಜಗಳು ಕತ್ತಿಯ ಹಿಡಿಗಳು ತಾಮ್ರದ ಚಹಪಾತ್ರೆಗಳು ಮುಂತಾದವುಗಳು ಮೇಲೆಲ್ಲ ನವುರಾಗಿ ನಾಜೂಕಾಗಿ ಅಲಂಕರಣಗಳನ್ನು ಕಂಡರಿಸಿರುವುದು ಇಲ್ಲಿನ ವೈಶಿಷ್ಟ್ಯ.									(ಎಂ.ಎಚ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ